ಎಪಿಗ್ರಾಫಿಯ ಜಿಲೇನಿಕ
	ಸಿಂಹಳದ ಶಾಸನ ಸಾಹಿತ್ಯವನ್ನು ಪ್ರಕಟಿಸಲು ಪ್ರಾರಂಭವಾದ (1904) ನಿಯತಕಾಲಿಕ, ಸಿಂಹಳದ ಪುರಾತತ್ವ ಶಾಖೆಯ ಕಮಿಷನರ್ ಆದ (1890) ಎಚ್. ಸಿ. ಪಿ. ಬೆಲ್ ಎಂಬ ವಿದ್ವಾಂಸ ಆ ದ್ವೀಪದ ಪ್ರಾಚೀನ ಅವಶೇಷಗಳ ಸಂಶೋಧನೆಯಲ್ಲಿ ಮಹತ್ತ್ವದ ಕಾರ್ಯಗಳನ್ನು ಕೈಕೊಂಡು ಅನೇಕ ಶಾಸನಗಳನ್ನು ಕಂಡುಹಿಡಿದು ಅವನ್ನು ಪ್ರತ್ಯೇಕವಾದ ಪತ್ರಿಕೆಯಲ್ಲಿ ಪ್ರಕಟಿಸಬೇಕೆಂದು ಸರ್ಕಾರಕ್ಕೆ ಸಲಹೆ ನೀಡಿದ. ಸರ್ಕಾರ ಅದರಂತೆ ವಿಕ್ರಮ ಸಿಂಗ್ ಎಂಬ ವಿದ್ವಾಂಸನನ್ನು ಸರ್ಕಾರದ ಶಾಸನತಜ್ಞನೆಂದು ನೇಮಿಸಿ ಅವನಿಗೆ ಆ ಪತ್ರಿಕೆಯ ಸಂಪಾದಕತ್ವವನ್ನು ವಹಿಸಿಕೊಡಲಾಯಿತು. ಆಗ್ಗೆ ವಿಕ್ರಮ್‍ಸಿಂಗ್ ಲಂಡನ್ ವಿಶ್ವವಿದ್ಯಾನಿಲಯದಲ್ಲಿ ಅಧ್ಯಾಪಕನೆಂದು ನೇಮಿಸಲ್ಪಟ್ಟಿದ್ದರಿಂದ ಅಲ್ಲಿದ್ದುಕೊಂಡು ತನ್ನ ಹೊಸ ಕಾರ್ಯದ ಜೊತೆಗೆ ಈ ಪತ್ರಿಕೆಯ ಸಂಪಾದನೆಯ ಕೆಲಸವನ್ನು ನಿರ್ವಹಿಸಿದ. 1904ರಿಂದ 1927ರ ಅವಧಿಯಲ್ಲಿ ಈ ಪತ್ರಿಕೆಯ ಮೊದಲ ಮತ್ತು ಎರಡನೆಯ ಸಂಪುಟಗಳು ಅವನ ಸಂಪಾದಕತ್ವದಲ್ಲಿ ಪ್ರಕಟವಾದವು. ಈ ಸಂಪುಟಗಳಲ್ಲಿ ವಿಕ್ರಮ್‍ಸಿಂಗ್ ಪ್ರಸಿದ್ಧಪಡಿಸಿದ ಶಾಸನಗಳೇ ಇವೆ. ಮುಂದೆ ಸಿಂಹಳ ಸರ್ಕಾರದ ಪುರಾತತ್ವ ಶಾಖೆಯ ಕಮಿಷನರಾಗಿ ಅಧಿಕಾರ ವಹಿಸಿಕೊಂಡ ಸುಪ್ರಸಿದ್ಧ ವಿದ್ವಾಂಸ ಎಸ್. ಪರನವಿತನ ಈ ಪತ್ರಿಕೆಯ ಸಂಪಾದಕನಾಗಿ 1929ರಿಂದ 1941ರ ಅವಧಿಯಲ್ಲಿ 3 ಮತ್ತು 4ನೆಯ ಸಂಪುಟಗಳನ್ನು ಪ್ರಸಿದ್ಧಪಡಿಸಿದ ಅವನ ಸಂಪಾದಕತ್ವದಲ್ಲಿಯೇ 1955ರಲ್ಲಿ 5ನೆಯ ಸಂಪುಟದ 1ನೆಯ ಸಂಚಿಕೆ, 1963ರಲ್ಲಿ 2ನೆಯ ಸಂಚಿಕೆ ಮತ್ತು 1965ರಲ್ಲಿ ಸಿ. ಇ. ಗೋದಕುಂಬುರನ ಸಂಪಾದಕತ್ವದಲ್ಲಿ ಅದೇ ಸಂಪುಟದ 3ನೆಯ ಸಂಚಿಕೆಗಳು ಪ್ರಕಟವಾಗಿವೆ. ಹಾಗೂ 1966ರಲ್ಲಿ ಈ ಸಂಪುಟಗಳ ವಿಷಯಸೂಚಿಯನ್ನೊಳಗೊಂಡ ಸಂಚಿಕೆ ಪ್ರಕಟವಾಗಿವೆ. ಹೀಗೆ ಕ್ರಿ. ಶ. 1904ರಲ್ಲಿ ಆರಂಭವಾದ ಈ ಪತ್ರಿಕೆಯ 5 ಸಂಪುಟಗಳು ಇದುವರೆಗೆ ಪ್ರಕಟವಾಗಿವೆ. ಅವುಗಳಲ್ಲಿ ಸಿಂಹಳದ್ವೀಪದ ಅನೇಕ ಮಹತ್ತ್ವದ ಶಾಸನಗಳು ಪ್ರಕಟವಾಗಿದ್ದು ಅಲ್ಲಿಯ ಇತಿಹಾಸ-ಸಂಸ್ಕøತಿಗಳ ಅಧ್ಯಯನಕ್ಕೂ ಆ ದೇಶ ಐತಿಹಾಸಿಕ ಕಾಲದಲ್ಲಿ ಭಾರತದೊಡನೆ ಹೊಂದಿದ್ದ ನಿಕಟಸಂಪರ್ಕವನ್ನು ತಿಳಿದುಕೊಳ್ಳುವುದಕ್ಕೂ ಅತಿ ಉಪಯುಕ್ತವಾದ ಸಾಧನಗಳಾಗಿವೆ.			
(ಜಿ.ಎಸ್.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ